ಹಿನ್ನೋಟ – ಮುನ್ನೋಟ :
ಧಾರವಾಡದ ಮನೋಹರ ಗ್ರಂಥಮಾಲೆಗೆ ೨೦೦೭-೨೦೦೮ ಸಂಭ್ರಮದ ವರ್ಷ. ೧೯೩೩ ರಲ್ಲಿ ಪ್ರಾರಂಭವಾದ ಪ್ರಕಟಣಾ ಸಂಸ್ಥೆ ಮನೋಹರ ಗ್ರಂಥ ಮಾಲಾ ಈಗ ತನ್ನ ಎಪ್ಪತ್ತೈದರಲ್ಲಿ ಪಾದಾರ್ಪಣೆ ಮಾಡುತ್ತಿದೆ. ಈ ಎಪ್ಪತ್ತೈದು ವರ್ಷಗಳಲ್ಲಿ ಈ ಮಾಲೆ ಬರೀ ಪ್ರಕಟಣೆಯನ್ನು ಒಂದು ಉದ್ಯೋಗವನ್ನಾಗಿ ಮಾತ್ರ ಮಾಡಿಕೊಳ್ಳದೆ ಕನ್ನಡ ಭಾಷೆ – ನಾಡು – ನುಡಿಯನ್ನು ಕಟ್ಟಿ ಬೆಳೆಸುವಲ್ಲಿ ಮಹತ್ತರವಾದ ಪಾತ್ರವಹಿಸುತ್ತ ಬಂದಿದೆ. ಸಾಧನೆಯ ಸ್ಮರಣೆಯೇ ನಿಜಕ್ಕೂ ಒಂದು ದೊಡ್ಡ ಹಬ್ಬ. ಶ್ರಮ, ಸಂಘಟನೆಯ ಸುಖ-ದುಃಖಗಳ ಒಂದು ಹಿನ್ನೋಟ ಇಲ್ಲಿದೆ.

ಗೆಳೆಯರ ಗುಂಪು :
ಸುಮಾರು ಎಂಭತ್ತು-ತೊಂಬತ್ತು ವರ್ಷಗಳ ಹಿಂದೆ ಇಡೀ ರಾಷ್ಟ್ರವೇ ಸ್ವಾತಂತ್ರ್ಯಕ್ಕಾಗಿ ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಒಂದಾಗಿ ಹೋರಾಡುತ್ತಿತ್ತು. ಈ ವಿಷಯದಲ್ಲಿ ಕರ್ನಾಟಕವೂ ಹಿಂದೆ ಬಿದ್ದಿರಲಿಲ್ಲ. ರಾಜಕೀಯದಷ್ಟೇ ಸಾಂಸ್ಕೃತಿಕವಾಗಿಯೂ ತನ್ನ ಹಿರಿಮೆಯನ್ನು ಕರ್ನಾಟಕ ಮೆರೆದಿತ್ತು. ಉತ್ತರ ಕರ್ನಾಟಕದಲ್ಲಿ ಅನೇಕ ಹಿರಿ-ಕಿರಿಯ ಲೇಖಕರು, ಬರಹಗಾರರು ತಮ್ಮ ಬರಹಗಳ ಮೂಲಕ ಜನ ಜಾಗೃತಿಯಲ್ಲಿ ತೊಡಗಿದ್ದರು. ದ.ರಾ. ಬೇಂದ್ರೆ ಪ್ರಮುಖರಲ್ಲಿ ಒಬ್ಬರು. ತಮ್ಮ ಸಮಾನ ಮನಸ್ಕರ ಜತೆ ಸೇರಿಕೊಂಡು ಗೆಳೆಯರ ಗುಂಪು ಸ್ಥಾಪಿಸಿದರು. ಈ ಗೆಳೆಯರ ಗುಂಪಿನ ಸಾಧನೆ ಇಂದಿಗೂ ಒಂದು ಇತಿಹಾಸ. ಸ್ವಲ್ಪೇ ದಿನ ಕಾರ್ಯ ವಹಿಸಿದರೂ ಗೆಳೆಯರ ಗುಂಪು ಸಾಂಸ್ಕೃತಿಕವಾಗಿ ಬಹು ದೊಡ್ಡ ಹೆಸರನ್ನು ಮಾಡಿತು. ಈ ಗುಂಪಿನ ಸದಸ್ಯರೆಲ್ಲ ನಂತರ ದಿನಗಳಲ್ಲಿ ಪ್ರಖ್ಯಾತ ಲೇಖಕರಾದರು. ಸಾಧನೆ ಇಲ್ಲಿಯೇ ನಿಲ್ಲಲಿಲ್ಲ. ದ.ರಾ. ಬೇಂದ್ರೆ ನಂತರದ ದಿನಗಳಲ್ಲೂ ನೂರಾರು ಲೇಖಕರಿಗೆ ಮಾರ್ಗದರ್ಶಕರಾದರು. ಸ್ವಧರ್ಮ ಮತ್ತು ಜಯ ಕರ್ನಾಟಕ ಪತ್ರಿಕೆಗಳು ಗೆಳೆಯರ ಗುಂಪಿನ ಪತ್ರಿಕೆಗಳು. ನಾಡ ಹಬ್ಬ ಆಚರಿಸಿದ ಹೆಮ್ಮೆ ಗೆಳೆಯರ ಗುಂಪಿಗೆ. ಈ ಎಲ್ಲ ಸಾಧನೆ, ಆದರ್ಶಗಳೇ ಮನೋಹರ ಗ್ರಂಥಮಾಲೆಯ ಸ್ಥಾಪನೆಗೆ ಕಾರಣವಾದವು.

ಮನೋಹರ ಗ್ರಂಥಮಾಲೆ ಸ್ಥಾಪನೆ :
ಬೆಟಗೇರಿ ಕೃಷ್ಣಶರ್ಮಾ, ಜಿ.ಬಿ.ಜೋಶಿ ಮತ್ತು ಗೋವಿಂದ ಚುಳಕಿಯವರು ಗೆಳೆಯರ ಗುಂಪಿನ ಸದಸ್ಯರಾಗಿದ್ದರು. ೧೫-೦೮-೧೯೩೩ ರಂದು ಬೆಟಗೇರಿ ಕೃಷ್ಣಶರ್ಮ (ಆನಂದಕಂದ) ರ ಸುದರ್ಶನ ಕಾದಂಬರಿಯ ಪ್ರಕಟಣೆಯೊಂದಿಗೆ ಮನೋಹರ ಗ್ರಂಥಮಾಲೆ ಪ್ರಾರಂಭವಾಯಿತು. ಮೂವರು ಕೂಡಿ ಸ್ಥಾಪಿಸಿದ ಸಂಸ್ಥೆಯ ಹಿಂದೆ ಗೆಳೆಯರ ಗುಂಪಿನ ಸಹಕಾರ ಆದರ್ಶವಿತ್ತು. ಇವೇ ಆದರ್ಶಗಳೇ ಅವರ ಬಂಡವಾಳವಾಗಿದ್ದವು. ಮುದ್ರಣಕ್ಕೆ ಬೇಕಾದ ಕಾಗದ ಮುಂಬಯಿಯ ಕಾಗದ ವ್ಯಾಪಾರಿ ಜಯಂತಿಲಾಲ ಗಾಂಧಿ ಮತ್ತು ಕಂಪನಿಯವರು ಉದ್ದರಿಯಿಂದ ಕೊಟ್ಟರು. ಮುದ್ರಣವನ್ನು ಧಾರವಾಡದ ಕೆ.ಜಿ. ರಾಯದುರ್ಗ ಅವರು ತಮ್ಮ ಮೋಹನ ಮುದ್ರಣಾಲಯದಲ್ಲಿ ಉದ್ದರಿಯಲ್ಲಿ ಮಾಡಿಕೊಟ್ಟರು. ಗೆಳೆಯರ ಗುಂಪಿನ ಸದಸ್ಯರು ಯಾವ ಗೌರವ ಧನವಿಲ್ಲದೆಯೇ ಬರೆದು ಕೊಟ್ಟರು. ಹೀಗೆ ಮೊದಲ ವರ್ಷದಲ್ಲಿಯೇ ಆರು ಪುಸ್ತಕಗಳು ಪ್ರಕಟವಾದವು. ಇದೇ ರೀತಿ ಮುಂದುವರೆಯುವುದರಿಂದ ಸ್ಥಾಪಕರ ಮೂರು ಸಂಸಾರಗಳು ನಡೆಯುವುದು ಸಾಧ್ಯವಿಲ್ಲವೆಂದಿನಿಸಿದಾಗ ಜಿ.ಬಿ.ಜೋಶಿಯವರೊಬ್ಬರೇ ಮಾಲೆಯ ಭಾರವನ್ನು ಸ್ವತಂತ್ರವಾಗಿ ಹೊರಲು ಸಿದ್ಧರಾದರು. ೬೦ ವರ್ಷಗಳ ಕಾಲ ಅಂದರೆ ತಮ್ಮ ಜೀವನದ ಉದ್ದಕ್ಕೂ ಜಿ.ಬಿ.ಯವರು ಮನೋಹರ ಗ್ರಂಥಮಾಲೆಯನ್ನು ಗಟ್ಟಿಯಾಗಿ, ಕನ್ನಡದ ಸತ್ವಶಾಲಿ ಪ್ರಕಾಶನ ಸಂಸ್ಥೆಯನ್ನಾಗಿ ಬೆಳೆಯಿಸಿದರು.

ಸಾಹಿತ್ಯ ಸಲಹೆಗಾರರು :
ಮಾಲೆಯ ಭಾರ ಹೊತ್ತ ಜಿ.ಬಿಯವರು ಲಾಭ, ಲುಕ್ಸಾನು, ಸುಖ, ದುಃಖ, ಪ್ರಸಿದ್ಧಿ ಅಥವಾ ಸೋಲಿನ ಹೊಣೆಯನ್ನು ಬಹು ಸಮರ್ಥವಾಗಿ ನಿಭಾಯಿಸಿದರು. ಸಾಹಿತ್ಯ ಕೃತಿಗಳ ಆಯ್ಕೆಗಾಗಿ, ಸಲಹೆಗಾಗಿ ದ.ರಾ.ಬೇಂದ್ರೆ, ವಿನಾಯಕ ಗೋಕಾಕ ಮತ್ತು ರಂ.ಶ್ರೀ ಮುಗಳಿಯವರು ಬೆನ್ನಿಗೆ ನಿಂತರು. ಸುಮಾರು ಇಪ್ಪತ್ತೈದು ವರ್ಷಗಳವರೆಗೆ ಇವರ ಮಾರ್ಗದರ್ಶನವಿತ್ತು. ನಂತರ ಕನ್ನಡಕ್ಕೊಬ್ಬನೇ ಕೀರ್ತಿ ಎಂದು ಹೆಸರಾದ ಕೀರ್ತಿನಾಥ ಕುರ್ತಕೋಟಿಯವರು ಸಾಹಿತ್ಯ ಸಲಹೆಗಾರರಾಗಿ ಸೇರಿಕೊಂಡರು. ವಿಮರ್ಶೆಗೆ ಒಂದು ಹೊಸ ಭಾಷೆ ನೀಡಿ, ವಿಮರ್ಶೆಯೂ ಒಂದು ಸೃಜನಶೀಲ ಕಲೆ ಎಂದು ತೋರಿಸಿಕೊಟ್ಟ ಕೀರ್ತಿನಾಥ ಕುರ್ತಕೋಟಿಯವರು ಜಿ.ಬಿಯವರ ಜತೆಯಲ್ಲಿ ಹೆಗಲಿಗೆ ಹೆಗಲು ಹಚ್ಚಿ ದುಡಿಯುವುದರ ಜತೆಯಲ್ಲಿ ಮಾಲೆಗೆ ಒಂದು ಹೊಸ ಆಯಾಮವನ್ನೇ ನೀಡಿದರು. ಈಗ ಮಾಲೆಗೆ ಖ್ಯಾತ ನಾಟಕಕಾರ, ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ ಕಾರ್ನಾಡರು ಸಾಹಿತ್ಯ ಸಲಹೆಗಾರರಾಗಿದ್ದಾರೆ.

ಪ್ರಕಟವಾದ ಕೃತಿಗಳು :
ಪ್ರಕಟವಾದ ಕೃತಿಗಳು ನಾಲ್ಕುನೂರಕ್ಕೂ ಹೆಚ್ಚು. ಶ್ರೀರಂಗರ ವಿಶ್ವಾಮಿತ್ರ ಸೃಷ್ಟಿ , ಶಿವರಾಮ ಕಾರಂತರ ಮರಳಿ ಮಣ್ಣಿಗೆ, ವಿನಾಯಕರ ಸಮರಸವೇ ಜೀವನ, ಮಿರ್ಜಿ ಅಣ್ಣಾರಾಯರ ನಿಸರ್ಗ ಅ.ನ.ಕೃಷ್ಣರಾಯರ ಸಂಧ್ಯಾರಾಗ, ಮಂಗಳಸೂತ್ರ, ಶಂಕರ ಮೊಕಾಶಿ ಪುಣೇಕರರ ಗಂಗವ್ವ ಮತ್ತು ಗಂಗಾಮಾಯಿ, ರಾವಬಹದ್ದೂರರ ಗ್ರಾಮಾಯಣ, ಯು.ಆರ್.ಅನಂತಮೂರ್ತಿಯವರ ಸಂಸ್ಕಾರ, ಶ್ರೀಕೃಷ್ಣ ಆಲನಹಳ್ಳಿಯ ಕಾಡು ಹೀಗೆ ಹಲವಾರು ಉತ್ತಮ ಕಾದಂಬರಿಗಳು, ನಾ.ಕಸ್ತೂರಿಯವರ ಚಕ್ರದೃಷ್ಟಿ, ಗ್ರಹದಾರಣ್ಯಕ, ರಾ.ಕು. ಅವರ ಗಾಳಿಪಟ, ಮೊದಲಾದ ಕೃತಿಗಳನ್ನು ಕನ್ನಡಿಗರು ಅತ್ಯಂತ ಅಭಿಮಾನದಿಂದ ಸ್ವೀಕರಿಸಿದರು. ದ.ರಾ. ಬೇಂದ್ರೆಯವರ ನಾಟಕ ಹೊಸ ಸಂಸಾರ, ಕೀರ್ತಿನಾಥ ಕುರ್ತಕೋಟಿಯವರ ಆ ಮನಿ, ಜಡಭರತರ ಮೂಕಬಲಿ, ಗಿರೀಶ ಕಾರ್ನಾಡರ ಯಯಾತಿ, ತುಘಲಕ್, ಹಯವದನ, ಚಂದ್ರಶೇಖರ ಕಂಬಾರರ ಋಷ್ಯ ಶೃಂಗ ಮೊದಲಾದ ನಾಟಕಗಳು ಓದುಗರ ಮಧ್ಯೆಯೂ, ರಂಗಭೂಮಿಯ ಮೇಲೂ ಯಶಸ್ವಿ ನಾಟಕಗಳೆನಿಸಿದವು. ಇದಲ್ಲದೆ ದ.ರಾ. ಬೇಂದ್ರೆ, ವಿನಾಯಕ, ರಂ.ಶ್ರೀ. ಮುಗಳಿ, ಏ.ಕೆ. ರಾಮಾನುಜನ್‌ರ ಕವನ ಸಂಕಲನಗಳನ್ನೂ ಮಾಲೆ ಪ್ರಕಟಿಸಿತು. ವಿ.ಸೀ. ಸದಾನಂದ ನಾಯಕ, ಮಿರ್ಜಿ ಅಣ್ಣಾರಾಯ, ದ.ರಾ.ಬೇಂದ್ರೆ ಮೊದಲಾದವರ ವಿಮರ್ಶಾ ಗ್ರಂಥಗಳನ್ನು ಮಾಲೆ ಪ್ರಕಟಿಸಿದೆ. ಇದರ ಹೊರತಾಗಿ ಪ್ರವಾಸ, ಪತ್ರ, ಅಧ್ಯಾತ್ಮ, ಹರಟೆ ಸಾಹಿತ್ಯಗಳನ್ನು ಮಾಲೆ ಈ ವರೆಗೆ ಪ್ರಕಟಿಸಿದೆ.
ಪ್ರಕಟವಾದದ್ದೆಲ್ಲ ಉತ್ತಮ ಎಂದು ಹೇಳಿಕೊಳ್ಳುವ ಜಂಭ ಮಾಲೆಗಿಲ್ಲ. ಆದರೆ ಪ್ರಾಮಾಣಿಕವಾಗಿ ಯಾವಾಗಲೂ ಉತ್ತಮವಾದದ್ದನ್ನೇ ಕೊಡುವ ಪ್ರಯತ್ನವನ್ನು ಗ್ರಂಥಮಾಲೆ ಮಾಡಿದೆ. ಮುಂದೆಯೂ ಇದೇ ಉದ್ದೇಶದಿಂದ ನಡೆಯಲಿದೆ. ಸಾಹಿತ್ಯದ ವಿವಿಧ ಪ್ರಕಾರಗಳನ್ನು ಕೊಡುವುದರ ಜತೆಜತೆಯಲ್ಲಿ ಆಗಾಗ ಹೊಸ – ಹೊಸ ಪ್ರಯೋಗಗಳಿಗೂ ಗ್ರಂಥ ಮಾಲೆ ಕೈ ಹಾಕಿದೆ.

ಸಾರ್ಥಕ ಪ್ರಕಾಶನ :

೧೯೩೩ ರಿಂದ ಸತತವಾಗಿ ಗ್ರಂಥಮಾಲೆ ಪುಸ್ತಕಗಳನ್ನು ಪ್ರಕಾಶಿಸುತ್ತ ಬಂದಿದೆ. ಕಾದಂಬರಿ, ಕಾವ್ಯ, ನಾಟಕ, ಏಕಾಂಕಗಳು, ಜೀವನ ಚರಿತ್ರೆ, ದಿನಚರಿ, ಪ್ರವಾಸ ಸಾಹಿತ್ಯ, ಇತಿಹಾಸ, ಪ್ರಬಂಧಗಳು, ಹರಟೆಗಳು ಹೀಗೆ ಎಲ್ಲ ಪ್ರಕಾರಗಳಲ್ಲೂ ಪುಸ್ತಕಗಳನ್ನು ಮಾಲೆ ಪ್ರಕಟಿಸಿದೆ. ಕನ್ನಡ ಸಾಹಿತ್ಯಕ್ಕೆ ಒಟ್ಟಾರೆಯಾಗಿ ಅದ್ಭುತ ಕಾಣಿಕೆ ನೀಡಿರುವ ಗ್ರಂಥಮಾಲೆ ಎಂದೂ ತನ್ನ ಪ್ರಾರಂಭದ ಆದರ್ಶ, ಉದ್ದೇಶಗಳಿಂದ ಹಿಂದೆ ಸರಿದಿಲ್ಲ.

Free India shipping

On all orders above ₹300

Shipping & Delivery

2-4 days within Karnataka, 7-12 days outside Karnataka

Yearly Subscription available

Subscribe to yearly print subscription

Email & Phone Support

Call us at +91 9845447002 or email us at in**@gr*********.com