English Version Print Article
 

ನಡೆದು ಬಂದ ದಾರಿ

     
 

ಮನ್ವಂತರ

           ಮಾಲೆಯ ಮತ್ತೊಂದು ಮಹತ್ವದ ಕೊಡುಗಗೆ ಮನ್ವಂತರ ಷಾಣ್ಮಾಸಿಕ. ವಿಮರ್ಶೆ, ಹೊಸ ಕೃತಿಗಳ ಕುರಿತು ಆಲೋಚನೆ, ಸೃಜನಶೀಲ ಸಾಹಿತ್ಯ ನಿರ್ಮಾಣದಲ್ಲಿ ಮಾರ್ಗದರ್ಶನ ನೀಡುವಲ್ಲಿ ಮನ್ವಂತರದ ಕೊಡುಗೆ ಅಪಾರ. ದ.ರಾ. ಬೇಂದ್ರೆ ತಮ್ಮ ಜೀವನಗಾಥೆ, ಕಾವ್ಯೋದ್ಯೋಗ ಕುರಿತು ಅತ್ಯುತ್ತಮ ಪ್ರಬಂಧ ನೀಡಿದ್ದು ಮನ್ವಂತರದಲ್ಲಿಯೇ. ಅದೂ ಮೊದಲ ಸಂಪುಟದಲ್ಲಿಯೇ. ಕೀರ್ತಿನಾಥ ಕುರ್ತಕೋಟಿ, ಗಿರೀಶ ಕಾರ್ನಾಡ, ರಾಜೀವ ತಾರಾನಾಥ, ಚಂದ್ರಶೇಖರ ಕಂಬಾರ, ಜಿ.ಬಿ. ಜೋಶಿ ಮೊದಲಾದವರು ತಪ್ಪದೇ ಸಾಹಿತ್ಯ, ನಾಟಕ, ಕಾವ್ಯ ಇತ್ಯಾದಿ ಕುರಿತು ಮನ್ವಂತರದಲ್ಲಿ ಬರೆಯುತ್ತಿದ್ದರು.
ನಿಜಕ್ಕೂ ಮನ್ವಂತರ ಸೃಜನ ಹಾಗೂ ಸೃಜನೇತರ ಕನ್ನಡ ಸಾಹಿತ್ಯ ವಿಮರ್ಶಿಸುವಲ್ಲಿ, ಬೆಳೆಸುವಲ್ಲಿ ಮಹತ್ವದ ಕಾಣಿಕೆಯನ್ನೇ ನೀಡಿತು. ಕಾರಣಾಂತರದಿಂದ ಪ್ರಕಟಣೆ ನಿಂತರೂ ಮನ್ವಂತರ ಸಾಧನೆ ಮಾತ್ರ ಅಪಾರ.

   

ಪುಟ ಬಂಗಾರ

           ತನ್ನ ಸುವರ್ಣ ಮಹೋತ್ಸವ ಆಚರಣೆ ಸಂದರ್ಭದಲ್ಲಿ ಕಳೆದ ಐವತ್ತು ವರ್ಷಗಳಲ್ಲಿ ಪ್ರಕಟವಾದ ಒಟ್ಟಾರೆ ಸಾಹಿತ್ಯದಿಂದ ಆಯ್ದ ಕೆಲವು ಕೃತಿಗಳನ್ನು ನಾಲ್ಕು ಸಂಪುಟಗಳಲ್ಲಿ ಹಾಗೂ ದ.ರಾ. ಬೇಂದ್ರೆಯವರ ಆಯ್ದ ನೂರು ಕವಿತೆಗಳನ್ನು ವಿವರಣೆ ಸಹಿತ ಐದನೆಯ ಸಂಪುಟದಲ್ಲಿ ಹೊರತಂದು ಮತ್ತೊಂದು ಸಾಹಸವನ್ನೇ ಮನೋಹರ ಗ್ರಂಥಮಾಲೆ ಮಾಡಿತು.
ಹದಿಮೂರು ಕಾದಂಬರಿಗಳು, ಹದಿನಾರು ಸಣ್ಣ ಕಥೆಗಳು, ಒಂಭತ್ತು ಪ್ರಬಂಧಗಳು, ಐದು ಏಕಾಂಕಗಳು, ಐದು ಪೂರ್ಣ ಪ್ರಮಾಣದ ನಾಟಕಗಳು, ನಾಲ್ಕು ಪ್ರವಾಸ ಸಾಹಿತ್ಯ, ಜೀವನ ಚರಿತ್ರೆಗಳು, ನಾಲ್ಕು ಮುನ್ನುಡಿಗಳು, ನಾಲ್ಕು ವಿಮರ್ಶಾ ಲೇಖನಗಳು, ದ.ರಾ.ಬೇಂದ್ರೆಯವರ ಅರ್ಥ ವಿವರಣೆ, ಸಹಿತ ನೂರು ಕವಿತೆಗಳು ಹೀಗೆ ಐದು ಸಂಪುಟಗಳಲ್ಲಿ ಪುಟ ಬಂಗಾರ ಎಂಬ ಹೆಸರಿನಲ್ಲಿ ಪ್ರಕಟಿಸಲಾಯಿತು. ಕೀರ್ತಿನಾಥ ಕುರ್ತಕೋಟಿಯವರ ವಿದ್ವತ್ ಮುನ್ನುಡಿ ಹಾಗೂ ಜಿ.ಬಿ.ಯವರ ಸಮರ್ಥ ಹೊಣೆಗಾರಿಕೆಯಲ್ಲಿ ಹೊರಬಂದ ಈ ಸಂಪುಟಗಳನ್ನು ಓದುಗರು, ಸಾಹಿತಿಗಳು ತುಂಬ ಖುಷಿಯಿಂದ ಬರಮಾಡಿಕೊಂಡರು.